2ಮಲೆನಾಡಿನಲ್ಲಿ ಸಾಮಾನ್ಯವಾಗಿ ಒಂದು ನಿರ್ದಿಷ್ಟವಾದ ದಿನಚರಿ ಇರುತ್ತೆ. ಮಳೆ ಬರುವ ಸೂಚನೆ ಸಿಕ್ಕ ಕೂಡಲೇ ಗದ್ದೆ ತೋಟಗಳಲ್ಲಿ ಕೆಲಸ ಚುರುಕಾಗುತ್ತೆ. ನಂತರ ದೀಪಾವಳಿ ಕಳೆದು ಸಂಕ್ರಾಂತಿ ಬರುವವರೆಗೂ ಜನರೆಲ್ಲಾ ಬಗೆಬಗೆಯ ಬೆಳೆಗಳನ್ನು ಬೆಳೆಯೋದ್ರಲ್ಲಿ ಬ್ಯುಸಿಯಾಗಿರ್ತಾರೆ. ನಡುನಡುವೆ ಬರೋ ರಾಶಿ ರಾಶಿ ಹಬ್ಬಗಳನ್ನೂ ಚಾಚೂ ತಪ್ಪದೇ ನೇಮ-ನಿಷ್ಟೆಯಿಂದ ಪಾಲಿಸ್ತಾರೆ. ಒಮ್ಮೆ ಬೆಳೆ ಕಟಾವು ಮುಗಿದ ಮೇಲೆ ಅವ್ರು ಫುಲ್ ಫ್ರೀ. ಹಾಗಾಗಿ ಹೊಲ ಗದ್ದೆಯ ಜೊತೆಜೊತೆಗೆ ಒಂದಷ್ಟು ಚಿಕ್ಕ ಪುಟ್ಟ ವ್ಯವಹಾರ ಮಾಡ್ಕೊಂಡು ಜೀವನ ಸಾಗಿಸೋದು ಅಲ್ಲಿನ ಜನರ ಜೀವನಕ್ರಮ.

ವರ್ಷಕ್ಕೆ ಎರಡು ಬೆಳೆ ಬೆಳಯುವವರು, ತರಕಾರಿ ಬೆಳೆಯುವವರಿಗೆ ಸದಾ ಕೈತುಂಬಾ ಕೆಲಸ ಇರುತ್ತೆ. ಆದ್ರೆ ಉಳಿದವರೇ ಇಲ್ಲಿ ಮೆಜಾರಿಟಿ ಇರೋದ್ರಿಂದ ಇದು ಮೆಜಾರಿಟಿ ಮಂದಿಯ ವಿಚಾರ. ಸಾಮಾನ್ಯವಾಗಿ ಸ್ವಲ್ಪ ತೋಟ, ಗದ್ದೆ ಇದ್ದವರು ಸಣ್ಣದೊಂದು ಅಂಗಡಿಯೋ, ಹೋಟೆಲ್ಲೋ ಇಟ್ಟುಕೊಂಡು ಜೊತೆಜೊತೆಗೇ ಒಂದು ಸೈಡ್ ಬ್ಯುಸಿನೆಸ್ ಮಾಡ್ತಿರ್ತಾರೆ. ಅವ್ರಿಗೆಲ್ಲಾ ಬೇಸಿಗೆ ಅಂದ್ರೆ ‘ಅಂಗಡಿಯಲ್ಲಿ ಫುಲ್ ರಶ್ಶು’ ಅನ್ನೋ ಟೈಂ.

ಹಾಗಾಗಿ ಪ್ರಪಂಚವೆಲ್ಲಾ ಮಕ್ಕಳಿಗೆ ಬೇಸಿಗೆ ರಜೆ ಅಂತ ಟೂರ್, ಟ್ರಿಪ್ ಹೋದ್ರೆ ಇವ್ರು ಮಾತ್ರ ಅಂಗಡಿ ವಹಿವಾಟಿನಲ್ಲಿ ಫುಲ್ ಬ್ಯುಸಿ ಇರ್ತಾರೆ. ಮಲೆನಾಡಿಗೆ ಬೇಸಿಗೆಯಲ್ಲಿ ಬರೋ ಪ್ರವಾಸಿಗರ ಸಂಖ್ಯೆ ಸ್ವಲ್ಪ ಜಾಸ್ತಿನೇ. `ಇದು ಸೀಸನ್ನು’ ಅನ್ನೋದು ಅವ್ರು ಕೊಡೋ ರೆಡಿಮೇಡ್ ಉತ್ತರ. ಹಾಗಾಗಿ ಮಲೆನಾಡಿನಲ್ಲಿ ಬೇಸಿಗೆ ರಜೆ ಮುಗಿಸಿ ವಾಪಸ್ ಶಾಲೆಗೆ ಬಂದ ಮಕ್ಕಳು ರಜೆಯಲ್ಲಿ ಎಲ್ಲಿ ಹೋಗಿದ್ದೆ ? ಅನ್ನೋ ಪ್ರಶ್ನೆಗೆ ಕೊಡೋ 99% ಉತ್ತರ ಅಜ್ಜಿ ಮನೆಗೆ! ಮನೆಯ ಮುಖ್ಯಸ್ಥರೆಲ್ಲಾ ‘ಸೀಸನ್’ ನ ದುಡಿಮೆಯಲ್ಲಿ ಬ್ಯುಸಿಯಾಗಿರುವುದರಿಂದ ಮಕ್ಕಳನ್ನು ಬೇರೆ ಕಡೆ ಕರೆದುಕೊಂಡು ಹೋಗೋದಾದ್ರೂ ಯಾರು?

ಅನೇಕ ಬಾರಿ ಇಡೀ ವರ್ಷದ ವಹಿವಾಟನ್ನು ಬೇಸಿಗೆಯ ಎರಡು ಮೂರು ತಿಂಗಳಲ್ಲೇ ದುಡಿದುಕೊಂಡು ಬಿಡ್ತಿದ್ರು ಅಲ್ಲಿಯ ಜನ. ನಂತರ ಮಳೆ-ಚಳಿಗಾಲದಲ್ಲಿ ಹೆಚ್ಚೇನೂ ವ್ಯಾಪಾರವಾಗದಿದ್ರೂ ಯಾರಿಗೂ ಏನೂ ಬೇಸರವಾಗ್ತಿರ್ಲಿಲ್ಲ. ಆದ್ರೆ ಈಗ ಮಲೆನಾಡಿನಲ್ಲಿ ಎಲ್ಲವೂ ಬದಲಾಗ್ತಿದೆ. ಬೇಸಿಗೆ-ಮಳೆಗಾಲ-ಚಳಿಗಾಲ ಎಲ್ಲವೂ ಒಂದೇ ಥರಾ ಆಗ್ಬಿಟ್ಟಿದೆ. ಮೊದಲೆಲ್ಲಾ ಬೇಸಿಗೆಯಲ್ಲಿ ಮಲೆನಾಡು ತಂಪು ಅಂತ ಬರ್ತಿದ್ದ ಪ್ರವಾಸಿಗರು ಈಗ ಮಲೆನಾಡಿನ ಮಳೆ ನೋಡೋಕೆ ಅಂತಲೋ ಚಳಿಗಾಲದ ಹಿಮದಲ್ಲಿ ನೆನೆಯೋಕೆ ಅಂತಲೋ ನೆಪ ಇಟ್ಕೊಂಡು ವರ್ಷಪೂರ್ತಿ ಬರ್ತಿದ್ದಾರೆ. ಹಾಗಾಗಿ ಈಗ ‘ಪೀಕ್ ಸೀಸನ್ನು’ ಅನ್ನೋ ಕಾನ್ಸೆಪ್ಟೇ ಕಣ್ಮರೆಯಾಗ್ತಿದೆ.

ಮೊದಲೇ ಗದ್ದೆ ತೋಟ ನಂಬಿಕೊಂಡಿರೋ ಮಂದಿ ಕಡಿಮೆ. ಬರೀ ಬೇಸಿಗೆಯಲ್ಲಿ ಮಾತ್ರ ವ್ಯಾಪಾರ ಜೋರಾಗಿರ್ತಾ ಇದ್ದಿದ್ರಿಂದ ಉಳಿದ ಟೈಮಲ್ಲಿ ತಂತಮ್ಮ ಹೊಲಗಳಿಗೆ ಜನ ಹಿಂದಿರುಗುತ್ತಿದ್ರು. ಆದ್ರೆ ಈಗ ವರ್ಷಪೂರ್ತಿ ಇಲ್ಲೇ ವ್ಯಾಪಾರ ಜೋರಾಗಿರೋದ್ರಿಂದ ಮೊದಲೇ ಕಡಿಮೆಯಾಗ್ತಿದ್ದ ಉಳುಮೆಯ ಭೂಮಿ ಮತ್ತಷ್ಟು ಕುಗ್ಗುತ್ತಿದೆ. ಆಳುಗಳ ಅಭಾವದಿಂದಾಗಿ ಕಾಫಿ ತೋಟಗಳೆಲ್ಲಾ ಹೋಮ್ ಸ್ಟೇಗಳಾಗಿ ಮಾರ್ಪಾಡಾಗ್ತಿವೆ. ವೀಕೆಂಡ್ ಗಳಲ್ಲಿ ತುಂಬಿರೋ ಹೋಮ್ ಸ್ಟೇಗಳಲ್ಲಿ ಉಳಿದ ದಿನಗಳಲ್ಲಿ ಅಲ್ಲಿದ್ದವರೇ ಹೋಮ್ ಗಳಲ್ಲಿ ಸ್ಟೇ ಮಾಡ್ಬೇಕಷ್ಟೇ ಅನ್ನುವಂತಿದೆ. ಆದ್ರೂ ಅವುಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು ಕಡಿಮಯಂತೂ ಆಗ್ತಿಲ್ಲ.

ಮೊದಲಿನಂತೆ ಒಂದು ಋತುವಿನಲ್ಲಿ ಮಾತ್ರ ಭರ್ಜರಿ ವ್ಯಾಪಾರ ಆಗ್ತಿಲ್ಲ. ವರ್ಷಪೂರ್ತಿ ಒಂದೇ ಥರಾ ‘ಸಾಧಾರಣ’ ಎನ್ನುವಂತೆ ನಡೀತಿದೆ ಅಷ್ಟೇ. ಇದೆಲ್ಲಾ ಆತಂಕಕಾರಿ ಬೆಳವಣಿಗೆಗಳೋ ಅಲ್ವೋ ಗೊತ್ತಿಲ್ಲ…ಆದ್ರೆ ಮಲೆನಾಡಿನ ದಿನಚರಿಗಳು ಬದಲಾಗ್ತಿವೆ ಅನ್ನೋದಂತೂ ಸತ್ಯ !

Malehani Avatar

Published by

Leave a comment