tastetest

ಈಗೆಲ್ಲಾ ಕೆಲಸಗಳು ಎಷ್ಟೊಂದು ಸುಲಭ ಆಗ್ಬಿಟ್ಟಿವೆ ಅಲ್ವಾ? ಅಡುಗೆ ಮಾಡೋಕೆ ತರಕಾರಿ ತಂದು ತೊಳೆದು ಕತ್ತರಿಸಬೇಕಾಗಿಲ್ಲ. ಅದೆಲ್ಲವನ್ನೂ ಮಾಡಿ ನೀಟಾಗಿ ಪ್ಯಾಕ್ ಮಾಡಿಟ್ಟಿರೋದನ್ನ ತಂದು ಬಳಸಿದ್ರೆ ಆಯ್ತು. ಮಸಾಲೆಗಳನ್ನ ಹುರಿದು ಯಾವ ಕಾಲವಾಯ್ತಪ್ಪಾ… ಎಂಟಿಆರ್ ರೆಡಿಮೇಡ್ ಮಿಕ್ಸ್ ಇದ್ಯಲಾ…ವೈ ಟೇಕ್ ಟೆನ್ಶನ್? ಅದೂ ಬೇಸರ ಅನ್ನೋರಿಗೆ ರೆಡಿ ಟು ಈಟ್‌ ಪ್ಯಾಕೆಟ್… ಕತ್ತರಿಸಿ, ಬಿಸಿ ಮಾಡಿ, ತಿನ್ನಿ. ಮನೆ ಊಟ ರೆಡಿ. ಮನೆಯಲ್ಲಿ ಕೂತು ಮಾಡಿದ ಊಟ ಮನೆ ಊಟಾನಾ?
ಇದು ಬರೀ ಊಟ-ತಿಂಡಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಸೀರೆ ಉಡೋ ರಗಳೆ ಕಮ್ಮಿ ಮಾಡೋಕೆ ರೆಡಿಮೇಡ್ ಸೀರೆ. ನೆರಿಗೆ ತೆಗೆದು ಹೊಲೆದಿಟ್ಟಿರ್ತಾರೆ. ತಗೊಂಡು ಬಂದು ಸ್ಕರ್ಟ್ ಥರ ಹಾಕಿಕೊಂಡರಾಯ್ತು. ಹೀಗೆ ಮಾಡಿದ್ರೆ ಸೀರೆ ಉಟ್ಟಂತಾಯ್ತು ನಿಜ. ಆದ್ರೆ ಉಡೋ ಸಂಭ್ರಮ ಸಿಗುತ್ತಾ? ಬಳಸೋ ಮಾನಿನಿಯರೇ ಹೇಳ್ಬೇಕು…
ಒಂದು ಹೋಟೆಲಿದೆ. ಅಲ್ಲಿ ಅನ್ನ, ಸಾಂಬಾರಿನಿಂದ ಹಿಡಿದು ಉಪ್ಪಿನಕಾಯಿ, ಹಪ್ಪಳದವರಗೆ ಪ್ರತಿಯೊಂದೂ ಫ್ರೆಶ್ ಆಗಿ ಸಿಗುತ್ತೆ… ಕೆಜಿ ಮತ್ತು ಲೀಟರುಗಳಲ್ಲಿ. ದಿನಾ ತಿಂಡಿ-ಊಟದ ಸಮಯದಲ್ಲಿ ಆ ಹೋಟೆಲಿನ ಮುಂದೆ ಕಿಲೋಮೀಟರುಗಟ್ಟಲೆ ಕ್ಯೂ. ಅಲ್ಲಿ ಸರತಿಯಲ್ಲಿ ನಿಂತೋರಲ್ಲಿ ಮುಕ್ಕಾಲು ಪಾಲು ಉಳ್ಳವರೇ. ಹಾಗಾದ್ರೆ ಅವ್ರೆಲ್ಲಾ ಮನೇಲಿ ಒಲೆ ಹಚ್ಚೋಲ್ವಾ? ಆದ್ರೂ ಯಾಕೆ ಗ್ಯಾಸ್ ಸಿಲಿಂಡರ್ ಸಾಲ್ತಿಲ್ಲ?
ಇತ್ತೀಚೆಗೆ ಹೊಸ ಟ್ರೆಂಡ್ ಶುರುವಾಗಿದೆ. ಮನೆಗೇ ಬಂದು ಕಾರು ತೊಳೆದು, ಸರ್ವೀಸ್ ಮಾಡಿಕೊಡ್ತಾರೆ. ವರ್ಷಕ್ಕಿಷ್ಟು ಅಂತ ದುಡ್ಡು ಕೊಟ್ರೆ ವರ್ಷ ಪೂರ್ತಿ ನಿಮ್ಮ ಕಾರಿನ ಸೇವೆ ಅವರ ಜವಾಬ್ದಾರಿ.
ದಿನಾ ಬೆಳಗ್ಗೆ ಎದ್ದು ಹಿಂದಿನ ರಾತ್ರಿಯೇ ನೆನೆಸಿಟ್ಟ ಕಾಳನ್ನ ಮತ್ತೊಮ್ಮೆ ತೊಳೆದು ಸಾರು ಮಾಡಿ ಮಗ ಶಾಲೆಗೆ ಹೋಗೋದ್ರೊಳಗೆ ಬಿಸಿ ಬಿಸಿ ಅನ್ನ ಸಾರು ಡಬ್ಬಿಗೆ ಹಾಕಿ ಕೊಡೋಕ್ಕಿಂತ ಮ್ಯಾಗಿ ಮತ್ತು ಸ್ಯಾಂಡ್ ವಿಚ್ ಸುಲಭ ಅನ್ನಿಸೋಕೆ ಶುರುವಾಗಿದೆ ಅಲ್ಲಾ?
ನಮಗೆ ನಿಜಕ್ಕೂ ಇಷ್ಟೆಲ್ಲಾ ಅನುಕೂಲ ಬೇಕಾ? ಅಥವಾ ನಮ್ಮ ಕೆಲಸವನ್ನೂ ನಾವು ಮಾಡಿಕೊಳ್ಳಲಾರದಷ್ಟು ನಾವು ಸೋಮಾರಿಗಳಾಗಿದ್ದೀವಾ? ಅಥವಾ ನಮ್ಮನ್ನ ಸೋಮಾರಿಗಳನ್ನಾಗಿ ಮಾಡೋಕೆ ಅಂತಲೇ ಈ ಎಲ್ಲಾ ಸೌಕರ್ಯಗಳೂ ಬಂದಿವೆಯಾ?
ಮನೆಯವ್ರೆಲ್ಲಾ ಒಟ್ಟಿಗೆ ಕೂತು ಊಟ ಮಾಡ್ಬೇಕು ಅಂದ್ರೆ ಹೋಟೆಲಿಗೆ ಡಿನ್ನರ್ ಗೆ ಹೋಗೋದು ಅನಿವಾರ್ಯವಾ? ಅಂದ್ಹಾಗೆ ಸಾಂಬಾರು ಪುಡಿಯಲ್ಲಿ ಯಾವ್ಯಾವ ಮಸಾಲೆ ಪದಾರ್ಥಗಳಿರ್ತವೆ ಗೊತ್ತಾ? ಮನೆಯಲ್ಲಿ ಕೊನೇ ಬಾರಿ ಮಾವಿನ ಮಿಡಿ ತಂದು ಕೈಯಾರೆ ಉಪ್ಪಿನಕಾಯಿ ಹಾಕಿದ್ದು ಯಾವಾಗ?
ಜಸ್ಟ್ ಇಮ್ಯಾಜಿನ್‌. ಒಂದು ದಿನ ಈ ಎಲ್ಲಾ ರೆಡಿಮೇಡ್ ವಸ್ತುಗಳ ತಯಾರಿಕೆ ಸಂಪೂರ್ಣವಾಗಿ ಬಂದ್ ಆಗ್ಬಿಡುತ್ತೆ. ಆಗ ಯಾರಿಗೆ ಹೆಚ್ಚು ನಷ್ಟ ಆಗುತ್ತೆ? ಇವುಗಳನ್ನೆಲ್ಲಾ ತಯಾರಿಸೋ ಕಂಪೆನಿಗಳಿಗಾ ಅಥವಾ ಇವುಗಳ ಮೇಲೆ ಅವಲಂಬಿಸಿರೋ ಜನಗಳಿಗಾ?
ಬ್ಯುಸಿ ಜೀವನಶೈಲಿ. ಹಾಗಾಗಿ ಕೆಲಸ ಸುಲಭ ಆಗ್ಬೇಕು. ಈಗಿನ ಜಮಾನಾದಲ್ಲಿ ದುಡಿಮೆ ಅನಿವಾರ್ಯ. ಎಷ್ಟು ದುಡ್ಡಿದ್ರೂ ಸಾಲಲ್ಲ. ಇವೆಲ್ಲಾ ಎಷ್ಟೊಂದು ಸಿಲ್ಲಿ ಅನ್ಸುತ್ತೆ. ಈ ವಸ್ತುಗಳು ನಮ್ಮ ಅನುಕೂಲಕ್ಕಿರ್ಬೇಕೆ ಹೊರತು ನಮಗೆ ಅನಿವಾರ್ಯವಾಗಬಾರದು. ಅಮ್ಮ ಮಾಡೋ ತಿಳಿಸಾರು ಇಂದಿಗೂ ದಿ ಬೆಸ್ಟ್ ಅಲ್ವಾ? ಅಮ್ಮನ್ನ ಕೇಳಿ ನೋಡಿ… ಯಾವ ಬ್ರಾಂಡ್ ಸಾರಿನ ಪುಡಿ ಬಳಸ್ತೀಯಾ ಅಂತ. ಅಯ್ಯೋ ಅದನ್ನೇನು ಅಂಗಡಿಯಿಂದ ತರೋದು. ನಿಂಗೆ ಎಷ್ಟು ಬೇಕು ಹೇಳು… ನಾನೇ ಮಾಡಿ ಕೊಡ್ತೀನಿ. ಬೇಕೆನಿಸಿದಾಗ ಬಿಸಿಬಿಸಿಯಾಗಿ ಮಾಡಿಕೊಂಡು ತಿನ್ನುವೆಯಂತೆ ಅನ್ತಾರೆ. ಅಷ್ಟೇ.

Malehani Avatar

Published by

Leave a comment