alone-beach-free-girl-photoshop-Favim.com-113709

ಯಾಕೋ ಈಗೀಗ ಶಾಲ್ಮಲಿ ತುಂಬಾ ಆರಾಮಾಗಿದ್ದಾಳೆ. ಹಾಗಂತ ಅದು ತಪ್ಪು ಅಂತಲ್ಲ. ಆದ್ರೆ ಮೊದಲೆಲ್ಲಾ ಯಾವಾಗ್ಲೂ ಡಿಸ್ಟರ್ಬ್ ಆಗಿರೋ ಥರಾ ಕಾಣ್ತಿದ್ಲು. ಈಗ ಹಾಗೇನಿಲ್ಲ, ನಿಜಕ್ಕೂ ಆರಾಮಾಗಿದ್ದಾಳೆ.
ಮೊದಲಿಂದಲೂ ಶಾಲ್ಮಲಿ ಬಿಂದಾಸ್ ಹುಡುಗಿ. ಯಾರಿಗೂ, ಯಾವುದಕ್ಕೂ ಕೇರ್ ಮಾಡ್ತಲೇ ಇರ್ಲಿಲ್ಲ. ಬೇರೆಯವರ ತಂಟೆಗೂ ಹೋಗ್ತಿರ್ಲಿಲ್ಲ, ತನ್ನ ತಂಟೆಗೆ ಬೇರೆಯವ್ರು ಬರೋದಕ್ಕೂ ಬಿಡ್ತಿರ್ಲಿಲ್ಲ. ಮನೆಯಲ್ಲಿ ಅವಳನ್ನು ಬೆಳೆಸಿದ್ದೂ ಹಾಗೇ. ಎಲ್ಲಾ ಹೆಣ್ಣುಮಕ್ಕಳಂತೆಯೇ ಇವಳಿಗೂ ಒಂದಷ್ಟು ಕಟ್ಟುಪಾಡುಗಳು ಇದ್ದದ್ದು ಹೌದಾದ್ರೂ ತನ್ನ ತಮ್ಮನಿಗಿಂತ ತನಗೆ ಮನೆಯಲ್ಲಿ ರೂಲ್ಸ್ ಕಡಿಮೆ ಅಂತ ಇವತ್ತಿಗೂ ಅವಳಿಗೆ ಹೆಮ್ಮೆ.
ಕೆಲಸ ಅರಸಿ ಬೆಂಗಳೂರಿಗೆ ಬಂದ್ಮೇಲೆ ಶಾಲ್ಮಲಿಗೆ ಯಾವತ್ತೂ ಒಬ್ಬಂಟಿ ಅಂತ ಅನಿಸೇ ಇಲ್ಲ. ಒಂದು ಒಳ್ಳೇ ಕೆಲಸ ಸಿಕ್ತು. ಇರೋಕ್ಕೊಂದು ಪಿಜಿನೂ ಹುಡುಕಿಯಾಯ್ತು. ಆಯ್ತಲ್ಲಾ…ಮತ್ತೇನು ಬೇಕು ? ಅನ್ಕೊಂಡು ಖುಷಿಯಾಗೇ ಹೊಸ ಬದುಕು ಶುರುಮಾಡಿದ್ಲು. ಇವಳಿಗೆ ರಜೆ ಇರೋ ದಿನ ಪಿಜಿಯಲ್ಲಿ ಎಲ್ರೂ ಆಫೀಸಿಗೆ ಹೋಗಿರ್ತಾ ಇದ್ರು. ಹಾಗಾಗಿ ಒಬ್ಬಳೇ ಓಡಾಡೋಕೆ ಶುರು ಮಾಡಿದ್ಲು. ಒಬ್ಬಳೇ ಶಾಪಿಂಗ್ ಹೋಗೋದು, ಬೇಕಾದ್ದನ್ನು ಕೊಳ್ಳೋದು, ಹೊಸ ಜಾಗ ನೋಡೋದು, ಹೋಟೆಲಿಗೆ ಹೋಗಿ ಗಡದ್ದಾಗಿ ಊಟ ಮಾಡೋದು…ಹೀಗೆ ಎಲ್ಲವನ್ನೂ ಒಬ್ಬಳೇ ಆರಾಮಾಗಿ ಮಾಡಿಕೊಂಡಿದ್ಲು. ಕೆಲವರು ಯಾರೂ ಜೊತೆಗೆ ಇಲ್ಲದಿದ್ರೆ ಊಟ ಕೂಡ ಮಾಡದೇ ಹಾಗೇ ಇರೋದನ್ನ ನೋಡಿದಾಗೆಲ್ಲಾ ಶಾಲ್ಮಲಿಗೆ ಅಚ್ಚರಿಯಾಗ್ತಿತ್ತು. ತಾನು ಅಷ್ಟೆಲ್ಲಾ ಡಿಪೆಂಡೆಂಟ್ ಅಲ್ಲಾ ಅನ್ನೋದೇ ಅವಳಿಗೆ ನೆಮ್ಮದಿ ಕೊಡ್ತಿತ್ತು. ಹೀಗೇ ರೂಢಿಯಾದ್ಮೇಲೆ ಭಾನುವಾರ ನನಗೆ ರಜೆ ಸಿಗೋದೇ ಬೇಡ ಅಂದುಕೊಳ್ತಾ ಇದ್ಲು. ನಂಗೆ ಭಾನುವಾರ ಆಫೀಸಿಗೆ ಬಂದು ಕೆಲ್ಸ ಮಾಡೋಕೆ ಇಷ್ಟ ಅನ್ನೋ ಅವಳ ಮಾತು ಇವತ್ತಿಗೂ ಅನೇಕರಿಗೆ ಅರ್ಥವಾಗಿಲ್ಲ.
ಬದುಕಿನ ಬಂಡಿ ಹೀಗೇ ಸಾಗ್ತಾ ಇದ್ದಾಗ ಅವನು ಬಂದ. ಬಣ್ಣ ಸ್ವಲ್ಪ ಕಪ್ಪು, ಆದ್ರೆ ಮನಸ್ಸು ಹಾಲಿಗಿಂತ ಸ್ವಚ್ಛ ಅನಿಸುವಂತವನು. ನಾನೇನು ಐಶ್ವರ್ಯಾ ರೈ ಅಲ್ಲಾ…ಸೋ ನಂಗೆ ಅಭಿಷೇಕ್ ಬಚ್ಚನ್ನೇ ಬೇಕು ಅನ್ನೋದು ದಡ್ಡತನ ಅಂತ ಅವಳಿಗೆ ಗೊತ್ತು. ಅವನು ನಿಜಕ್ಕೂ ಒಳ್ಳೆ ಹುಡುಗ. ಇವಳ ಬಗ್ಗೆ ಕಾಳಜಿ ಇದೆ, ಬದುಕು ಕಟ್ಟೋ ಕನಸಿದೆ, ಎಲ್ಲವೂ ಸರಿ. ಆಗಾಗ ಜಗಳ ಆಡಿ ದಿನಗಟ್ಟಲೆ ಮಾತು ಬಿಟ್ಟಾಗೆಲ್ಲಾ ‘ನಾವು ನಾರ್ಮಲ್’ ಅಂತ ಕಣ್ಣುಮಿಟುಕಿಸ್ತಾಳೆ ಶಾಲ್ಮಲಿ. ‘ಸ್ವಲ್ಪ ಮೆಚ್ಯೂರ್ಡ್ ಆಗಿ ಬಿಹೇವ್ ಮಾಡು’ ಅಂತ ಅವನು ಬೈದಾಗೆಲ್ಲಾ ಅಷ್ಟೊಂದು ಮೆಚ್ಯೂರಿಟಿ ಬೇಕಿದ್ರೆ ಯಾವ್ದಾದ್ರೂ ಮುದುಕಿಯನ್ನ ಮದ್ವೆಯಾಗು ಹೋಗು ಅಂತಾಳೆ ಇವ್ಳು.
ಇಂಥಾ ಶಾಲ್ಮಲಿ ಕೂಡ, ಎಲ್ಲದರಲ್ಲೂ ಒಳ್ಳೆಯದನ್ನೇ ಹುಡುಕೋದು ತಪ್ಪಾ? ಅನ್ನೋ ಪ್ರಶ್ನೆಗೆ ಉತ್ತರ ಸಿಗದೆ ಸೋತಿದ್ದಾಳೆ. ಮೊದಲೆಲ್ಲಾ ಜಗಳ ಆಗಿ ಮಾತು ಬಿಟ್ಟಾಗ ಗಂಟೆಗಟ್ಟಲೆ ಅಳ್ತಾ ಇದ್ಲು. ನಾನು ಪ್ರೀತಿಸಿದ್ದೇ ತಪ್ಪು ಅಂದುಕೊಳ್ತಾ ಇದ್ಲು. ಆದ್ರೆ ಈಗೀಗ ಮಾತು ಬಿಟ್ರೆ ಏನೂ ಅನಿಸಲ್ಲ. ಒಂದೆರಡು ದಿನ ಆರಾಮಾಗಿ ಇರಬಹುದು ಅಂದುಕೊಳ್ತಾಳೆ. ಇದೊಂಥರಾ ವರ್ಷಪೂರ್ತಿ ಗಂಡ, ಮನೆ, ಮಕ್ಕಳು ಅಂತ ಬ್ಯುಸಿಯಾದ ಗೃಹಿಣಿಗೆ ಹತ್ತು ದಿನ ರಜೆ ಸ್ಯಾಂಕ್ಷನ್ ಮಾಡಿ ಕೈಗೆ ಹಣ ಕೊಟ್ಟು ‘ಎಂಜಾಯ್!’ ಅಂದಂತೆ ಅಂತ ನಕ್ಕು ಬಿಡ್ತಾಳೆ. ಜಗಳವಾದ ಆ ನಾಲ್ಕು ದಿನ ಮತ್ತೆ ಹಿಂದಿನಂತೆ ಒಬ್ಬಳೇ ಹೋಗಿ ಶಾಪಿಂಗ್ ಮಾಡ್ತಾಳೆ, ಐಸ್ಕ್ರೀಂ ತಿನ್ತಾಳೆ, ಸುಮ್ನೆ ಪಾರ್ಕಲ್ಲಿ ಒಂದು ವಾಕ್ ಹೋಗ್ತಾಳೆ, ಯಾವುದೋ ಪುಸ್ತಕ ಓದ್ತಾಳೆ. ನಾಲ್ಕು ದಿನಕ್ಕೆ ಇಬ್ಬರಿಗೂ ಬೋರಾಗಿ ಮತ್ತೆ ಮಾತು ಮನೆ ಕಟ್ಟುತ್ತೆ.
ಹಾಗಾದ್ರೆ ಸ್ವಾತಂತ್ರ್ಯ ಅಂದ್ರೆ ಏನು ಅನ್ನೋದು ಶಾಲ್ಮಲಿಯನ್ನು ಕಾಡೋ ಪ್ರಶ್ನೆ. ನಾಲ್ಕು ದಿನದ ಆ ಒಂಟಿ ಬಿಂದಾಸ್ ಬದುಕಾ ಅಥವಾ ಅದರ ನಂತರದ ಎಂದಿನ ನಾರ್ಮಲ್ ಜೀವನವಾ? ತಾನೇನೂ ಅವನನ್ನು ಮದುವೆಯಾಗಿಲ್ಲ. ಗೆಳೆತನ ಬೇಡ ಅನಿಸಿದ ಕ್ಷಣ ಹೊರನಡೆಯಬಹುದು. ಆದರೆ ಅವನೆಂದರೆ ತನಗಿಷ್ಟ. ಪ್ರೀತಿ ಬೇಡವಾಗಿತ್ತು ಅಂತ ಅದೆಷ್ಟೇ ಸಲ ಅನ್ಸಿದ್ರೂ ಇವನ ಬದಲು ಬೇರೆ ಯಾರೋ ಇರಬೇಕಿತ್ತು ಅಂತ ಯಾವತ್ತೂ ಅನಿಸಿಲ್ಲ. ಶಾಲ್ಮಲಿಯ ಡಿಕ್ಷನರಿಯಲ್ಲಿ ಪ್ರೀತಿಯ ಅರ್ಥ ಅದೇ.
ಸ್ವಾತಂತ್ರ್ಯ ಅನ್ನೋದು ಮನಸ್ಸಿಗೆ ಸಂಬಂಧಪಟ್ಟದ್ದು ಅನ್ನೋದು ಶಾಲ್ಮಲಿ ಕಂಡುಕೊಂಡ ಸತ್ಯ. Happiness is a state of mind ಎನ್ನುವಂತೆ Freedom is also a state of mind. ನಾನು ಇನ್ಯಾರದ್ದೋ ಅಡಿಯಾಳು, ಬಂಧಿ, ಅವರು ಹಾಕಿದ ರೂಲ್ಸ್ ಫಾಲೋ ಮಾಡೋಕೆ ಅಂತಲೇ ಇರುವವಳು ಅಂತ ಯಾವತ್ತು ಮನಸ್ಸು ನಿರ್ಧರಿಸುತ್ತೋ ಅವತ್ತು ಬದುಕು ಸ್ವಾತಂತ್ರ್ಯ ಕಳ್ಕೊಳ್ಳುತ್ತೆ. ನಾನು ನಾನೇ, ನನಗಿಷ್ಟ ಬಂದಂತೆ ಯೋಚಿಸಬಲ್ಲೆ, ನನಗಿಷ್ಟ ಬಂದಂತೆ ಇರಬಲ್ಲೆ ಅಂದ್ರೆ ಶಾಲ್ಮಲಿಯ ಗೆಳೆತಿಯರು ಒಪ್ಪೋದಿಲ್ಲ. ಯಾರಿಗೂ ತಮಗಿಷ್ಟಬಂದಂತೆ ಇರೋಕೆ ಆಗಲ್ಲಾ ಬಿಡೇ ಅಂತಾರೆ. ಆದ್ರೆ ಅವರು ಸ್ವಾತಂತ್ರ್ಯವನ್ನ ಕನಸಿನ ಜೊತೆಗೆ confuse ಮಾಡ್ಕೊಂಡಿದ್ದಾರೆ ಅನ್ನೋದು ಇವಳ ಅನುಮಾನ.
ನನಗೆ ಅಮೆಜಾನ್ ಕಾಡು ಸುತ್ತೋಕೆ ಆಸೆ. ಆದ್ರೆ ಗಾಂಧಿ ಬಜಾರನ್ನು ಒಬ್ಬಳೇ ಸುತ್ತುತ್ತೀನಿ. ಇದು ಸ್ವಾತಂತ್ರ್ಯ. ಅಮೆಜಾನ್ ಕಾಡಿಗೆ ಹೋಗೋಕೆ ಹಣವೂ ಸೇರಿದಂತೆ ಮಾಡಿಕೊಳ್ಳಬೇಕಾದ ತಯಾರಿ ಬಹಳಷ್ಟಿರುತ್ತೆ. ಹಾಗಾಗಿ ಅಲ್ಲಿಗೆ ಹೋಗ್ಬೇಕು ಅನ್ನೋದು ನನ್ನ ಕನಸು. ಅದನ್ನು ನನಸು ಮಾಡಲು ನಾನು ಪ್ರಯತ್ನಿಸಬಹುದು. ಆದ್ರೆ ಗಾಂಧಿ ಬಜಾರಿನ ರಸ್ತೆಗಳಲ್ಲಿ ಒಬ್ಬಳೇ ಆರಾಮಾಗಿ ಓಡಾಡಿಕೊಂಡು ತರಕಾರಿ, ಹಣ್ಣು ತರ್ತೀನಲ್ಲಾ…ಅದು ನನ್ನ ಸ್ವಾತಂತ್ರ್ಯ ಅನ್ನೋದು ಶಾಲ್ಮಲಿ ವಾದ.
ಪ್ರತಿದಿನ ಅಡುಗೆ ಮಾಡುವಾಗ ಗೃಹಿಣಿ ತನಗಿಷ್ಟವಾದ ತರಕಾರಿಯ ಸಾರು ಮಾಡ್ತಾಳೆ. ಮನೆಯಲ್ಲಿ ಯಾರಿಗಿಷ್ಟವೋ ಅವರು ಅದನ್ನು ತಿನ್ತಾರೆ. ಇಷ್ಟವಿಲ್ಲದವ್ರು ಹೊರಗೆ ಊಟ ಮಾಡ್ತಾರೆ. ಆಂದ್ರೆ ತನ್ನ ಸ್ವಾತಂತ್ರ್ಯವನ್ನ ಆ ಗೃಹಿಣಿ ತರಕಾರಿಯ ಮೂಲಕ ಪಡೆದಿದ್ದಾಳೆ. ಹಾಗೇ ಇದು ಕೂಡ. ಸ್ವತಂತ್ರವಾದ ಮನಸ್ಸು ಅದಕ್ಕೆ ಸಾವಿರ ದಾರಿ ಹುಡುಕಿ, ಪಡೆಯುತ್ತೆ. ನಾನು ಬಂಧಿ ಅನ್ಕೊಂಡ್ರೆ ನನ್ನ ಬದುಕಿನಲ್ಲಿ ಎಲ್ಲವೂ ದಾಸ್ಯದಲ್ಲೇ ನಡೀತಿದೆ ಅನ್ಸುತ್ತೆ ಅಂತ ಇಷ್ಟುದ್ದ ಭಾಷಣ ಮಾಡಿದ್ಲು ಶಾಲ್ಮಲಿ.
Freedom is a state of mind ಅನ್ನೋದು ಅರ್ಥವಾಗಿರೋದ್ರಿಂದಲೇ ಶಾಲ್ಮಲಿ ಆರಾಮಾಗಿದ್ದಾಳೆ. ಹಾಗಾದ್ರೆ ಎಲ್ಲದರಲ್ಲೂ ಒಳ್ಳೆಯದನ್ನು ಹುಡುಕೋದು ನಿಜಕ್ಕೂ ತಪ್ಪಲ್ಲ. ಅದಕ್ಕೆ ಧೈರ್ಯ ಇರಬೇಕಷ್ಟೇ.

Malehani Avatar

Published by

Leave a comment